ಗ್ರೆಶಾಮನ ನಿಯಮ

 	ಕೆಟ್ಟ ಹಣವೂ ಒಳ್ಳೆಯ ಹಣವೂ ಏಕಕಾಲದಲ್ಲಿ ಚಲಾವಣೆಯಲ್ಲಿದ್ದರೆ ಒಳ್ಳೆಯ ಹಣವನ್ನು ಅಪಸಂಚಯ ಮಾಡುವ ಮತ್ತು ಕೆಟ್ಟ ಹಣವನ್ನು ಸಾಧ್ಯವಾದ ಮಟ್ಟಿಗೆ ಖರ್ಚುಮಾಡುವ ಸಾಮಾನ್ಯ ಪ್ರವೃತ್ತಿಯಿಂದಾಗಿ ಕೆಟ್ಟ ಹಣ ಒಳ್ಳೆಯ ಹಣವನ್ನು ಚಲಾವಣೆಯಿಂದ ಹೊರದೂಡುವುದೆಂಬ ನಿಯಮ (ಗ್ರೆಶಾಮ್ಸ್ ಲಾ). ಇಂಗ್ಲೆಂಡಿನ ರಾಣಿ 1ನೆಯ ಎಲಿಜûಬೆತಳ ಹಣಕಾಸಿನ ಮಂತ್ರಿಯಾಗಿದ್ದ ತಾಮಸ್ ಗ್ರೆಶಾಮ್ ಇದನ್ನು ಕಂಡುಹಿಡಿನೆಂದು ಹೇಳಲಾಗಿದೆಯಾದರೂ ಇದನ್ನು ಕಂಡುಹಿಡಿದವನು ಅವನಲ್ಲ. ಎಲಿಜಬೆತಳಿಗೆ ಹಿಂದೆ ಇದ್ದ ದೊರೆ ಎಂಟನೆಯ ಹೆನ್ರಿ ಪೌಂಡ್ ನಾಣ್ಯಕ್ಕೆ ಕೀಳ್ಬೆರಕೆ ಮಾಡಿದ್ದರ ಪರಿಣಾಮವಾಗಿ ಆ ನಾಣ್ಯದ ವಿನಿಮಯ ದರ ಬಿದ್ದದ್ದನ್ನು ಕುರಿತ ವಿವೇಚನೆಯನ್ನು 1857ರಲ್ಲಿ ಹೆನ್ರಿ ಡಿ. ಮ್ಯಾಕ್‍ಲಿಯಡ್ ತಪ್ಪಾಗಿ ಅರ್ಥಮಾಡಿಕೊಂಡು ಗ್ರೆಶಾಮನಿಗೆ ಈ ನಿಯಮವನ್ನು ಆರೋಪಿಸಿದ. ಇದು 1550ರ ವೇಳೆಗೇ ಸಾಕಷ್ಟು ಪರಿಚಿತವಾಗಿತ್ತು. ಅನೇಕರು ಈ ಬಗ್ಗೆ ಬರೆದಿದ್ದರು. ಅಂಥವರಲ್ಲಿ ನಿಕೊಲಾಸ್ ಕೊಪರ್ನಿಕಸ್ (1473--1543) ಎಂಬ ಖಗೋಳ ವಿಜ್ಞಾನಿಯೂ ಒಬ್ಬ. ನಾಣ್ಯ ಟಂಕನ ಕುರಿತ ಪ್ರಬಂಧವೊಂದರಲ್ಲಿ ಅವನು ಇದನ್ನು ವಿವರಿಸಿದ್ದ. ಹಂಫ್ರಿ ಹೋಲ್ಟ್ ಎಂಬವನೊಬ್ಬ 1551ರಲ್ಲಿ ಇಂಗ್ಲೆಂಡಿನ ನಾಣ್ಯಚಲಾವಣೆಯ ದುಸ್ಥಿತಿಯನ್ನು ಕುರಿತು ಬರೆಯುತ್ತ, ತೂಕವುಳ್ಳ ನಾಣ್ಯಗಳೆಲ್ಲ ರಫ್ತಾಗುತ್ತಿವೆಯೆಂದೂ ಕೀಳುದರ್ಜೆಯ ನಾಣ್ಯಗಳು ಚಲಾವಣೆಯಲ್ಲಿ ಉಳಿಯುತ್ತಿವೆಯೆಂದೂ ಕೀಳ್ಬೆರಕೆಯ ನಾಣ್ಯಗಳ ಪ್ರವಾಹದಿಂದಾಗಿ ಸಾರ್ವತ್ರಿಕವಾಗಿ ಬೆಲೆಗಳು ಏರುತ್ತಿವೆಯೆಂದೂ ಬರೆದ. 1559ರಲ್ಲಿ ಗ್ರೆಶಾಮನಿಗೂ ಇದರಿಂದ ದಿಗ್ಭ್ರಮೆಯಾಗಿತ್ತು. ಅವನದೆಂದು ಹೇಳಲಾದ ನಿಯಮಕ್ಕೆ ವಿರುದ್ಧವಾಗಿ ವಿವಿಧ ಚೊಕ್ಕಗುಣಗಳ (ಫೈನ್‍ನೆಸ್)ನಾಣ್ಯಗಳು ಒಂದೇ ಮೌಲ್ಯವುಳ್ಳವಂತೆ ಚಲಾವಣೆಯಲ್ಲಿದ್ದುವು. ಹೀಗೆ ಚಲಾವಣೆಗೆ ತಂದ ನಾಣ್ಯಗಳು ಆವಶ್ಯಕತೆಗಿಂತ ಅಧಿಕವಾದ ಮೊತ್ತದಲ್ಲಿರಲಿಲ್ಲವಾದ್ದರಿಂದ ಇವೆಲ್ಲ ಒಂದೇ ಮೌಲ್ಯವುಳ್ಳವಂತೆ ಚಲಾವಣೆಯಲ್ಲಿದ್ದುವು. ಅರ್ಥಶಾಸ್ತ್ರಕ್ಕೆ ಗ್ರೆಶಾಮ್ ನಿಜವಾಗಿಯೂ ನೀಡಿದ ಕೊಡುಗೆ ಈ ನಿಯಮವಲ್ಲ. ಪೌಂಡ್ ಸ್ಟರ್ಲಿಂಗಿನ ವಿನಿಮಯದರವನ್ನು ಸ್ತಿಮಿತಗೊಳಿಸುವುದಕ್ಕಾಗಿ ಸಮಕರಣ ನಿಧಿಯೊಂದನ್ನು ಸ್ಥಾಪಿಸಬೇಕೆಂಬುದು ಅವನ ಕಾಣಿಕೆ. ಆಗ ಇದಕ್ಕೆ ರಾಣಿಯ ಒಪ್ಪಿಗೆ ದೊರಕಲಿಲ್ಲವಾದರೂ 400 ವರ್ಷಗಳ ಅನಂತರ ಇದನ್ನು ಬ್ರಿಟನ್ ಮಾನ್ಯ ಮಾಡಿತು.   

	ಗ್ರೆಶಾಮನದೆಂದು ಹೇಳಲಾದ ನಿಯಮ ತುಂಬ ಸರಳವಾಗಿದೆ. ಸಾಮಾನ್ಯವಾಗಿ ಸಾರ್ವಜನಿಕರು ಒಂದೇ ಬೆಲೆಯ, ಒಂದೇ ಲೋಹದ, ಅನೇಕೆ ನಾಣ್ಯಗಳಲ್ಲಿ ವ್ಯತ್ಯಾಸ ವ್ಯಕ್ತಪಡಿಸದಿದ್ದರೂ ಹಣಕಾಸಿನ ವ್ಯವಹಾರಗಳು, ಚಿನ್ನದ ಗಟ್ಟಿಯ ವ್ಯಾಪಾರಿಗಳು, ಲೇವಾದೇವಿಗಾರರು ಮತ್ತು ಅಕ್ಕಸಾಲಿಗರು ಒಂದೇ ಲೋಹದ, ಒಂದೇ ಬೆಲೆಯ ನಾಣ್ಯಗಳಲ್ಲಿಯ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸುವುದಲ್ಲದೆ, ಅದರಿಂದ ಲಾಭವನ್ನೂ ಪಡೆಯುತ್ತಾರೆ. ಹೊಸದಾದ, ಪೂರ್ಣಕಾಯದ ನಾಣ್ಯಗಳನ್ನು ಆಭರಣಗಳಿಗಾಗಿ, ಚಿನ್ನದ ಗಟ್ಟಿಗಳಿಗಾಗಿ ಕರಗಿಸುವುದಲ್ಲದೆ, ಹೊರದೇಶಗಳಿಗೆ ರಫ್ತು ಮಾಡುತ್ತಾರೆ. ಟಂಕಸಾಲೆಯಿಂದ ಬಂದ ಹೊಸ ಮತ್ತು ಪೂರ್ಣ ಕಾಯದ ನಾಣ್ಯಗಳು ಅಪಸಂಚಯಗೊಳ್ಳುವುದರಿಂದ ಚಲಾವಣೆಯಲ್ಲಿ ಕೇವಲ ಕೆಟ್ಟ ನಾಣ್ಯಗಳೇ ಉಳಿಯುತ್ತವೆ.  

	ಗ್ರೆಶಾಮನ ನಿಯಮ ಒಂದೇ ಲೋಹದ ಬೇರೆಬೇರೆ ನಾಣ್ಯಗಳಿಗೆ ಪ್ರಮುಖವಾಗಿ ಅನ್ವಯವಾದರೂ ದ್ವಿಲೋಹ ಪದ್ಧತಿಯಲ್ಲಿ ಚಲಾವಣೆಯಲ್ಲಿರುವ ಎರಡು ಲೋಹಗಳ ನಾಣ್ಯಗಳಿಗೂ, ಲೋಹನಾಣ್ಯವೂ ಕಾಗದದ ಹಣವೂ ಒಟ್ಟಿಗೆ ಚಲಾವಣೆಯಲ್ಲಿರುವ ಹಣ ಪದ್ಧತಿಗೂ ಅನ್ವಯವಾಗುತ್ತದೆ. ಒಂದೇ ಲೋಹದ ಎರಡು ನಾಣ್ಯಗಳಲ್ಲಿ ಒಂದು ಕೆಟ್ಟ ನಾಣ್ಯವಾಗಿಯೂ ಮತ್ತೊಂದು ಒಳ್ಳೆಯ ನಾಣ್ಯವಾಗಿಯೂ ಜೊತೆಯಲ್ಲೇ ಚಲಾವಣೆಯಲ್ಲಿದ್ದರೆ, ಒಳ್ಳೆಯ ನಾಣ್ಯವನ್ನು ವಿನಿಮಯ ಮಾಧ್ಯಮವನ್ನಾಗಿ ಬಳಸುವ ಬದಲು ಇತರ ಹೆಚ್ಚು ಲಾಭದಾಯಕ ಕೆಲಸಗಳಿಗಾಗಿ ಉಪಯೋಗಿಸಿಕೊಂಡು, ಕೇವಲ ಕೆಟ್ಟ ನಾಣ್ಯವನ್ನೇ ಚಲಾಯಿಸುವ ಪ್ರವೃತ್ತಿ ಹೆಚ್ಚಾಗಿರುತ್ತದೆ. ಇಲ್ಲಿ ಕೆಟ್ಟ ನಾಣ್ಯವೆಂದರೆ, ಸವೆದ, ಕಚ್ಚಾದ, ತೂಕದಲ್ಲಿ ಕಡಿಮೆಯಾಗಿರುವ ನಾಣ್ಯವೆಂದು ಅರ್ಥ. ನಾಣ್ಯಗಳ ಮುಖಬೆಲೆಯೂ ಅವುಗಳ ಲೋಹದ ನಿಜಮೌಲ್ಯವೂ ಒಂದೇ ಆಗಿರುವ, ಹೆಚ್ಚು ಹೊಸದಾದ ಪೂರ್ಣಕಾಯದ ನಾಣ್ಯಗಳನ್ನು ಒಳ್ಳೆಯ ಹಣವೆಂದು ಕರೆಯಲಾಗಿದೆ.   

	ಪ್ರಪಂಚದ ಹಲವು ಪ್ರಮುಖ ರಾಷ್ಟ್ರಗಳಲ್ಲಿ ದ್ವಿಲೋಹ ನಾಣ್ಯಪದ್ಧತಿ ಜಾರಿಯಲ್ಲಿದ್ದಾಗ ಸಾಮಾನ್ಯವಾಗಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳೆರಡೂ ಒಟ್ಟಿಗೆ ಚಲಾವಣೆಯಲ್ಲಿದ್ದವು. ಇವೆರಡೂ ನಾಣ್ಯಗಳ ನಡುವಣ ಅನುಪಾತ ಅವುಗಳಲ್ಲಿರುವ ಲೋಹಗಳ ಮೌಲ್ಯಗಳಿಗೆ ಅನುಗುಣವಾಗಿ ನಿರ್ಧರವಾಗಿರುತ್ತವೆ. ಈ ಲೋಹಗಳ ಮಾರುಕಟ್ಟೆ ಬೆಲೆ ಇವುಗಳ ಸರಬರಾಯಿ ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ವ್ಯತ್ಯಾಸವಾಗುತ್ತಿದ್ದುದರಿಂದ ಸಾಪೇಕ್ಷವಾಗಿ ಆ ನಾಣ್ಯಗಳಲ್ಲಿ ಒಂದು ಒಳ್ಳೆಯದೂ ಇನ್ನೊಂದು ಕೆಟ್ಟದ್ದೂ ಆಗುತ್ತಿದ್ದುವು. ಗ್ರೆಶಾಮನ ನಿಯಮ ಕಾರ್ಯಮಾಡುತ್ತಿತ್ತು. ಚಿನ್ನದ ಸರಬರಾಯಿ ಹೆಚ್ಚಾಗಿ ಅದರ ಮಾರುಕಟ್ಟೆ ಬೆಲೆ ಕುಸಿದಾಗ, ಸಾಪೇಕ್ಷವಾಗಿ ಬೆಳ್ಳಿಯ ಬೆಲೆ ಹೆಚ್ಚಾಗಿ, ಬೆಳ್ಳಿಯ ನಾಣ್ಯಗಳು ಚಲಾವಣೆಯಿಂದ ಮಾಯವಾಗುತ್ತಿದ್ದುವು. ಬೆಳ್ಳಿಯ ಸರಬರಾಯಿ ಅಧಿಕವಾಗಿ ಅದರ ಮಾರುಕಟ್ಟೆ ಬೆಲೆ ಇಳಿದಾಗ ಸಾಪೇಕ್ಷವಾಗಿ ಚಿನ್ನದ ಮೌಲ್ಯ ಹೆಚ್ಚಿ ಅದು ಮಾಯವಾಗುತ್ತಿತ್ತು. ಹೀಗಾಗಿ, ಅಧಿಕೃತವಾಗಿ ಒಂದು ದೇಶ ದ್ವಿಲೋಹ ಪದ್ಧತಿಯನ್ನನುಸರಿಸುತ್ತಿದ್ದಾಗ್ಯೂ ವಾಸ್ತವವಾಗಿ ಸ್ವರ್ಣಪ್ರಮಿತಿ ಅಥವಾ ರಜತಪ್ರಮಿತಿ ಮಾತ್ರವೇ ಜಾರಿಯಲ್ಲಿರುತ್ತಿತ್ತು.  

	ಕಾಗದದ ಹಣ, ಲೋಹ ನಾಣ್ಯ ಇವೆರಡೂ ಏಕಕಾಲದಲ್ಲಿ ಚಲಾವಣೆಯಲ್ಲಿರುವಾಗ, ಸರ್ಕಾರದಲ್ಲಿ ಜನತೆಯ ವಿಶ್ವಾಸ ಒಂದು ವೇಳೆ ಕುಂದಿದರೆ, ಲೋಹನಾಣ್ಯಗಳು ಮಾಯವಾಗಿ ಕೇವಲ ಕಾಗದದ ಹಣವೇ ಚಲಾವಣೆಯಲ್ಲಿ ಉಳಿಯುವುದುಂಟು.   

	ಗ್ರೆಶಾಮನದೆನ್ನಲಾದ ಈ ನಿಯಮಕ್ಕೆ ಅನೇಕ ಅರ್ಥಶಾಸ್ತ್ರಜ್ಞರು ವಿವರಣೆ ನೀಡಿದ್ದಾರೆ. ರಿಕಾರ್ಡೋನ ಅಭಿಪ್ರಾಯದಲ್ಲಿ ಒಂದು ಕೆಟ್ಟ ನಾಣ್ಯ ಒಳ್ಳೆಯ ನಾಣ್ಯವನ್ನು ಯಾವಾಗಲೂ ಚಲಾವಣೆಯಿಂದ ಹೊರದೂಡುವುದಿಲ್ಲ. ಚಲಾವಣೆಯಲ್ಲಿರುವ ಮೊತ್ತ ಸಮಾಜಕ್ಕೆ ಅಗತ್ಯವಾದ ಮೊತ್ತಕ್ಕಿಂತ ಹೆಚ್ಚಾಗಿದ್ದಾಗ ಮಾತ್ರ ಗ್ರೆಶಾಮನ ನಿಯಮ ಅನ್ವಯವಾಗುತ್ತದೆ. ಒಳ್ಳೆಯ ನಾಣ್ಯ ಚಲಾವಣೆಯಿಂದ ಮಾಯವಾಗತೊಡಗುತ್ತದೆ. ಒಟ್ಟಿನಲ್ಲಿ ವಿನಿಮಯಮಾಧ್ಯಮವಾಗಿ ಉಪಯೋಗಿಸಲು ಅಗತ್ಯವಾದ ಮೊತ್ತಕ್ಕಿಂತ ಹೆಚ್ಚಾಗಿರುವ ಒಳ್ಳೆಯ ನಾಣ್ಯಗಳು ಇತರ ಉದ್ದೇಶಗಳಿಗಾಗಿ ಅಪಸಂಚಯಗೊಳ್ಳುತ್ತದೆ. ಸಾರ್ವಜನಿಕರು ಕೆಟ್ಟ ನಾಣ್ಯಗಳ ಚಲಾವಣೆಯನ್ನು ಉಗ್ರವಾಗಿ ವಿರೋಧಿಸಿದರೆ, ಅವನ್ನು ತೆಗೆದುಕೊಳ್ಳಲು ನಿರಾಕರಿಸಿದರೆ ಆಗ ಕೆಟ್ಟನಾಣ್ಯಗಳು ಚಲಾವಣೆಯಿಂದ ಹೊರದೂಡಲ್ಪಡುತ್ತವೆ.  

	ಈ ನಿಯಮ ಕೆಲಸಮಾಡತೊಡಗಿದಾಗ ಬೆಲೆಗಳ ಮೇಲೂ ತೀವ್ರ ಪರಿಣಾಮವುಂಟಾಗುತ್ತದೆ. ಚಲಾವಣೆಯಲ್ಲಿ ಕೇವಲ ಕೆಟ್ಟ ಹಣ ಮಾತ್ರವೇ ಉಳಿದರೆ ಆ ಹಣದ ಕ್ರಯಶಕ್ತಿ ಕಡಿಮೆಯಾಗಿ ಬೆಲೆಗಳು ಏರುತ್ತವೆ.   

	ಕೆಟ್ಟ ಮತ್ತು ಒಳ್ಳೆಯ ನಾಣ್ಯಗಳೆರಡೂ ಏಕಕಾಲದಲ್ಲಿ ಚಲಾವಣೆಯಲ್ಲಿದ್ದಾಗ ಒಳ್ಳೆಯ ನಾಣ್ಯಗಳು ಮಾಯವಾಗುತ್ತಿದ್ದರೆ, ಈ ಪ್ರವೃತ್ತಿಯನ್ನು ತಡೆಗಟ್ಟಲು ಕೆಟ್ಟ ಹಣದ ವಿಧಿಮಾನ್ಯತೆಯನ್ನು ಹಿಂದೆಗೆದುಕೊಳ್ಳಬಹುದು. ಹಲವು ಲೋಹಗಳ ನಾಣ್ಯಗಳನ್ನು ಒಟ್ಟಿಗೆ ಚಲಾವಣೆಗೆ ತರಬೇಕಾದಾಗ ಹೆಚ್ಚು ಮೌಲ್ಯದ ಲೋಹದಿಂದ ಪ್ರಧಾನ ನಾಣ್ಯವನ್ನೂ ಕಡಿಮೆ ಮೌಲ್ಯದ ಲೋಹಗಳಿಂದ ಉಪ ನಾಣ್ಯಗಳನ್ನೂ ಟಂಕಿಸಿದರೆ ಆಗ ಆ ವಿವಿಧ ಲೋಹಗಳ ನಾಣ್ಯಗಳು ಬೇರೆ ಬೇರೆ ಮಟ್ಟಗಳಲ್ಲಿ ಚಲಾವಣೆಯಲ್ಲಿದ್ದು ಈ ಪ್ರವೃತ್ತಿ ತಲೆದೋರಲು ಅವಕಾಶ ಕಡಿಮೆಯಾಗುತ್ತದೆ.								(ಎನ್.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ